ತಿಸ್ಸ, ದೇವಾನಾಂಪ್ರಿಯ
 	ಕ್ರಿ . ಪೂ. 260-210. ಶ್ರೀಲಂಕಾದ ದೊರೆ. ಪಂಡುಕಭಯನ ಮೊಮ್ಮಗ, ಮುತಶಿವನ ಹತ್ತು ಮಂದಿ ಗಂಡುಮಕ್ಕಳಲ್ಲಿ ಎರಡನೆಯವ. ಮುತಶಿವನ ಮರಣಾನಂತರ ರಾಜನಾದ, ಭಾರತದ ಚಕ್ರವರ್ತಿ ಆಶೋಕ ಮೌರ್ಯನೊಡನೆ ತಿಸ್ಸ ಸಖ್ಯ ಬೆಳೆಸಿದ್ದ. ಶ್ರೀ ಲಂಕಾದಲ್ಲಿ ಬೌದ್ಧ ಧರ್ಮವನ್ನು ಪ್ರಚಾರ ಮಾಡಲು ಅಶೋಕ ತನ್ನ ಮಗ ಮಹೇಂದ್ರನೊಡನೆ ಬೋಧನೆಯನ್ನು ಆಲಿಸಿದ ತಿಸ್ಸ ಬೌದ್ಧಮತಕ್ಕೆ ಪರಿವರ್ತನೆ ಹೊಂದಿದೆ. ಅವನ ಪ್ರಜೆಗಳೂ ಬೌದ್ಧಮತವನ್ನು ಸ್ವೀಕರಿಸಿದರು. ತಿಸ್ಸನ ರಾಣಿ ಅನುಲಳೂ ಅವಳೊಡನಿದ್ದ ಐನೂರು ಮಂದಿ ಸ್ತ್ರೀಯರೂ ಬೌದ್ಧ ಧರ್ಮದೀಕ್ಷೆ ಪಡೆಯಬಯಸಿದರು. ಮಹೇಂದ್ರನ ತಂಗಿ ಭಿಕ್ಷುಣಿ ಸಂಘವಿತ್ರೆಯನ್ನು ಈ ಉದ್ದೇಶಕ್ಕಾಗಿ ಪಾಟಲಿಪುತ್ರದಿಂದ ಕಳುಹಿಸಿಕೊಡಲಾಯಿತು. ಅವಳೊಡನೆ ಶ್ರೀಲಂಕಾಗೆ ಬೋಧಿವೃಕ್ಷದ ಕೊಂಬೆಯೊಂದನ್ನು ತರಲಾಯಿತು. 

	ತಿಸ್ಸನಿಗೆ ಸಂತಾನ ಇರಲಿಲ್ಲ. ಅವನು ಕಾಲವಶನಾದ ಮೇಲೆ ಅವನ ತಮ್ಮ ಉತ್ತಿಯ ಪಟ್ಟಕ್ಕೆ ಬಂದ 
(ಎಂ.ಎನ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ